ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ಕೊಡದಿದ್ದರೆ ಬಿಜೆಪಿ ಶಾಸಕರ ನಿವಾಸದ ಮುಂದೆ ಪ್ರತಿಭಟನೆಯ ಎಚ್ಚರಿಕೆ

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವಕ್ಕೆ ಸರ್ಕಾರವು ಅನುಮತಿ ನೀಡದೇ ಹೋದಲ್ಲಿ ಆಗಸ್ಟ್ 30ರಂದು ಜಿಲ್ಲೆಯ ಬಿಜೆಪಿ ಶಾಸಕರ ನಿವಾಸದ ಮುಂದೆ ಪ್ರತಿಭಟನೆ ಮಾಡಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಶ್ರೀರಾಮಸೇನೆಯ ಗೌರವಾಧ್ಯಕ್ಷ ಹಾಗೂ ಆಂದೋಲಾದ ಸಿದ್ದಲಿಂಗ್ ಮಹಾಸ್ವಾಮೀಜಿ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷವೂ ಸಹ ಇಂತಹ ನಿರ್ಧಾರವನ್ನು ಸರ್ಕಾರ ಕೈಗೊಳ್ಳುವ ಮೂಲಕ ಸಾರ್ವಜನಿಕರ ವಿರೋಧವನ್ನು ಎದುರಿಸಿತ್ತು. ನಂತರ ಗಣೇಶೋತ್ಸವಕ್ಕೆ ಅವಕಾಶ ನೀಡಲಾಯಿತು. ಈಗ ಕೋವಿಡ್ ನಿಯಂತ್ರಣಕ್ಕೆ ಬಂದರೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ್ ಪ್ರತಿಷ್ಠಾಪನೆಗೆ ಸರ್ಕಾರ ನಿರ್ಬಂಧ ವಿಧಿಸಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
1893ರಲ್ಲಿ ರಾಷ್ಟ್ರಭಕ್ತಿಯ ಕಿಚ್ಚು ಹೊತ್ತಿಸಿ, ಮನೆಗಳಲ್ಲಿಯೇ ಸೀಮಿತವಾಗಿದ್ದ ಗಣೇಶ್ ಮೂರ್ತಿ ಸ್ಥಾಪನೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಕೂಡಿಸುವ ಮೂಲಕ ಲೋಕಮಾನ್ಯ ಬಾಲಗಂಗಾಧರ್ ಟಿಳಕ್ ಅವರು ಒಳ್ಳೆಯ ಕಾರ್ಯವನ್ನು ಮಾಡಿದ್ದಾರೆ. ಅಂತಹ ಒಳ್ಳೆಯ ಕಾರ್ಯಕ್ಕೂ ಸರ್ಕಾರವು ಅಡ್ಡಿಪಡಿಸುವುದು ಸರಿಯಲ್ಲ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರವು ಕೋವಿಡ್ ನಿಯಮಗಳನ್ನು ಒಬ್ಬರಿಗೆ ಒಂದು, ಇನ್ನೊಬ್ಬರಿಗೆ ಇನ್ನೊಂದು ಎನ್ನುವ ರೀತಿಯಲ್ಲಿ ಅನುಷ್ಠಾನಕ್ಕೆ ತಂದಿದೆ ಎಂದು ದೂರಿದ ಅವರು, ಮೊಹರಂ ಆಚರಣೆಗೆ ಯಾವುದೇ ಕೋವಿಡ್ ಅಡ್ಡಿ ಬರುವುದಿಲ್ಲ. ಅದೇ ರೀತಿ ಕೇಂದ್ರದಲ್ಲಿನ ನೂತನ ಸಚಿವರ ಜನಾಶೀರ್ವಾದ ಯಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದರೂ ಸಹ ಅದರಿಂದ ಏನೂ ಆಗುವುದಿಲ್ಲ. ಕೇವಲ ಗಣೇಶ್ ಪ್ರತಿಷ್ಠಾಪನೆ ಮಾಡಿದರೆ ಕೋವಿಡ್ ಬರುತ್ತದೆ ಎನ್ನುವಂತಹ ಕ್ರಮ ಕೈಗೊಳ್ಳುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ಅವರು ಹೇಳಿದರು.
ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ್ ಪ್ರತಿಷ್ಠಾಪನೆಗೆ ನಿರ್ಬಂಧ ವಿಧಿಸುವುದನ್ನು ಕೈಬಿಡಬೇಕು. ಇಲ್ಲದೇ ಹೋದಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು, ರಾಜ್ಯ ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರ ನಿವಾಸಗಳ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಇದಕ್ಕೂ ಒಂದು ವೇಳೆ ಸರ್ಕಾರ ಸ್ಪಂದಿಸದೇ ಹೋದಲ್ಲಿ ರಾಜ್ಯಾದ್ಯಂತ ಬೆಳಗಾವಿ, ಹುಬ್ಬಳ್ಳಿ- ಧಾರವಾಡ ಹಾಗೂ ಕಲಬುರ್ಗಿ ಮಹಾನಗರ ಪಾಲಿಕೆಗಳೂ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಸೆಪ್ಟೆಂಬರ್ 3ರಂದು ಜರುಗಲಿರುವ ಚುನಾವಣೆಗಳನ್ನು ಶ್ರೀರಾಮಸೇನೆಯು ಬಹಿಷ್ಕರಿಸಲಿದೆ ಎಂದು ಅವರು ಎಚ್ಚರಿಸಿದರು.
ಈಗಾಗಲೇ ಮೊಹರಂ ಸೇರಿದಂತೆ ಜುಲೂಸ್ ಮೆರವಣಿಗೆ ಮಾಡಿದರು. ಆಗ ಪೋಲಿಸರು ಯಾವುದೇ ಕಾನೂನು ಕ್ರಮಗಳನ್ನು ಕೈಗೊಳ್ಳಲಿಲ್ಲ. ಆದಾಗ್ಯೂ, ಈಗ ಸಾರ್ವಜನಿಕ ಗಣೇಶೋತ್ವವಕ್ಕೆ ಪೋಲಿಸರು ಕಟ್ಟುನಿಟ್ಟಿನ ನಿರ್ಬಂಧ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಗಣೇಶೋತ್ಸವಕ್ಕಾಗಿ ಈಗಾಗಲೇ ಹಲವಾರು ಕಾರ್ಮಿಕರು, ಮೂರ್ತಿ ತಯಾರಕರು ತಮ್ಮ ಜೀವನ ನಿರ್ವಹಣೆಗಾಗಿ ನಂಬಿ ಕುಳಿತಿದ್ದಾರೆ. ಅಂಥವರಿಗೆ ಕೂಡಲೇ ರಾಜ್ಯ ಸರ್ಕಾರವು ಸಂಕಷ್ಟದಿಂದ ಪಾರು ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವಕ್ಕೆ ಹಾಕಿದ ನಿರ್ಬಂಧವನ್ನು ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಮಹೇಶ್ ಗೊಬ್ಬೂರ್, ಮಹೇಶ್ ಕೆಂಭಾವಿ, ಸಚಿನ್ ಕುಮಸಿ, ರಾಕೇಶ್ ಜಮಾದಾರ್, ಈಶ್ವರ್ ಹಿಪ್ಪರಗಿ, ಚಂದ್ರಕಾಂತ್ ಕಾಳಗಿ ಮುಂತಾದವರು ಉಪಸ್ಥಿತರಿದ್ದರು.

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು