ಭಗವಂತನಲ್ಲಿ ತೊಡಗಿಸಿಕೊಳ್ಳುವ ಮನುಷ್ಯನನ್ನು ದೋಷರಹಿತರನ್ನಾಗಿ ಮಾಡುತ್ತಾನೆ ಶ್ರೀ ಕೃಷ್ಣ; ಗೀತೆಯ ಸಾರಾಂಶ

ಸರ್ವಭೂತಸ್ಥಿತಂ ಯೋ ಮಾಂ ಭಜತ್ಯೇಕತ್ವಮಾಸ್ಥಿತಃ |
ಸರ್ವಥಾ ವರ್ತಮಾನೋಪಿ ಸ ಯೋಗೀ ಮಯಿ ವರ್ತತೇ ||31||
ನಾನು ಮತ್ತು ಪರಮಾತ್ಮನು ಒಂದೇ ಎಂದು ತಿಳಿದು ಸದಾ ಪರಮಾತ್ಮನ ಭಕ್ತಿಪೂರ್ವಕ ಸೇವೆಯಲ್ಲಿ ತೊಡಗಿರುವ ಯೋಗಿಯು ಎಲ್ಲ ಸನ್ನಿವೇಶಗಳಲ್ಲಿಯೂ ನನ್ನಲ್ಲಿಯೇ ಇರುತ್ತಾನೆ.
ಭಾವಾರ್ಥ: ಪರಮಾತ್ಮನ ಧ್ಯಾನದಲ್ಲಿ ಮಗ್ನನಾದ ಯೋಗಿಯು ಶಂಖ, ಚಕ್ರ, ಗದೆ ಮತ್ತು ಪದ್ಮಗಳನ್ನು ನಾಲ್ಕು ಕೈಗಳಲ್ಲಿ ಹಿಡಿದ ವಿಷ್ಣುವನ್ನು ಕೃಷ್ಣನ ಸ್ವಾಂಶ ಭಾಗವಾಗಿ ತನ್ನಲ್ಲಿ ಕಾಣುತ್ತಾನೆ. ವಿಷ್ಣುವು ಕೃಷ್ಣನಿಂದ ಭಿನ್ನವಲ್ಲ ಎಂದ ಯೋಗಿಗೆ ತಿಳಿದಿರಬೇಕು. ಪರಮಾತ್ಮನ ಸ್ವರೂಪದಲ್ಲಿ ಕೃಷ್ಣನು ಪ್ರತಿಯೊಬ್ಬರ ಹೃದಯದಲ್ಲಿಯೂ ನೆಲೆಸಿದ್ದಾನೆ. ಅಲ್ಲದೆ ಜೀವಿಗಳ ಅಸಂಖ್ಯಾತ ಹೃದಯಗಳಲ್ಲಿ ಇರುವ ಅಸಂಖ್ಯಾತ ಪರಮಾತ್ಮರಲ್ಲಿ ವ್ಯತ್ಯಾಸವಿಲ್ಲ. ಸದಾ ಕೃಷ್ಣನ ದಿವ್ಯಪ್ರೇಮ ಸೇವೆಯಲ್ಲಿ ತೊಡಗಿರುವ ಕೃಷ್ಣಪ್ರಜ್ಞೆ ಇರುವ ಮನುಷ್ಯನಿಗೂ ಪರಮಾತ್ಮನ ಧ್ಯಾನದಲ್ಲಿ ತೊಡಗಿರುವ ಪರಿಪೂರ್ಣ ಯೋಗಿಗೂ ವ್ಯತ್ಯಾಸವಿಲ್ಲ.

ಕೃಷ್ಣಪ್ರಜ್ಞೆ ಇರುವ ಯೋಗಿಯು ಐಹಿಕ ಅಸ್ತಿತ್ವದಲ್ಲಿರುವಾಗ ವಿವಿಧ ಚಟುವಟಿಕೆಗಳಲ್ಲಿ ತೊಡಗಿರಬಹುದು, ಆದರೂ ಅವನು ಸದಾ ಕೃಷ್ಣನಲ್ಲಿ ನೆಲೆಸಿರುತ್ತಾನೆ. ಶ್ರೀ ರೂಪ ಗೋಸ್ವಾಮಿಯವರ ಭಕ್ತಿರಸಾಮೃತಸಿಂಧುವಿನಲ್ಲಿ (1.2.187) ಇದನ್ನು ದೃಢಪಡಿಸಿದೆ. ನಿಖಿಲಾಸ್ವಪ್ಯವಸ್ಥಾಸು ಜೀವನ್ಮುಕ್ತಃಸ ಉಚ್ಯತೇ. ಸದಾ ಕೃಷ್ಣಪ್ರಜ್ಞೆಯಲ್ಲಿ ಕರ್ಮಮಾಡುವ ಭಗವಂತನ ಭಕ್ತನು ಸಹಜವಾಗಿಯೇ ಮುಕ್ತನಾಗಿರುತ್ತಾನೆ. ನಾರದ ಪಂಚರಾತ್ರದಲ್ಲಿ ಇದನ್ನು ಹೀಗೆ ದೃಢಪಡಿಸಿದೆ -
ದಿಕ್ಕಾಲಾದ್ಯನವಚ್ಛಿನ್ನೇ ಕೃಷ್ಣೇ ಚೇತೋ ವಿಧಾಯ ಚ |
ತನ್ಮಯೋ ಭವತಿ ಕ್ಷಿಪ್ರಂ ಜೀವೋ ಬ್ರಹ್ಮಣಿ ಯೋಜಯೇತ್ ||
ಕೃಷ್ಣನು ಸರ್ವಾಂತರ್ಯಾಮಿ ಮತ್ತು ಕಾಲ ದೇಶಗಳನ್ನು ಮೀರಿದವನು. ಅವನ ದಿವ್ಯರೂಪದಲ್ಲಿ ಗಮನವನ್ನು ಕೇಂದ್ರೀಕರಿಸುವುದರಿಂದ ಮನುಷ್ಯನು ಕೃಷ್ಣ ಚಿಂತನೆಯಲ್ಲಿ ಮಗ್ನನಾಗುತ್ತಾನೆ. ಅನಂತರ ಕೃಷ್ಣನ ದಿವ್ಯ ಸಹವಾಸದ ಆನಂದ ಸ್ಥಿತಿಯನ್ನು ಪಡೆಯುತ್ತಾನೆ.
https://sovrn.co/4c6eikm

ಯೋಗಾಭ್ಯಾಸದಲ್ಲಿ ಕೃಷ್ಣಪ್ರಜ್ಞೆಯು ಸಮಾಧಿಯ ಅತ್ಯುನ್ನತ ಹಂತ. ಕೃಷ್ಣನು ಪ್ರತಿಯೊಬ್ಬರ ಹೃದಯದಲ್ಲಿಯೂ ಪರಮಾತ್ಮನಾಗಿ ನೆಲೆಸಿದ್ದಾನೆ ಎನ್ನುವ ಅರಿವೇ ಯೋಗಿಯನ್ನು ದೋಷರಹಿತನನ್ನಾಗಿ ಮಾಡುತ್ತದೆ. ಭಗವಂತನ ಈ ಗ್ರಹಿಕೆಗೆ ಮೀರಿದ ಶಕ್ತಿಯನ್ನು ವೇದಗಳು (ಗೋಪಾಲ ತಾಪನೀ ಉಪನಿಷತ್ತು 1.21) ಹೀಗೆ ದೃಢಪಡಿಸುತ್ತವೆ - ಏಕೋಪಿ ಸನ್ ಬಹುಧಾ ಯೋವಭಾತಿ ಭಗವಂತನು ಒಬ್ಬನೇ ಆದರೂ ಅಸಂಖ್ಯಾತ ಹೃದಯಗಳಲ್ಲಿ ಬಹುವಾಗಿ ಅವನು ಇದ್ದಾನೆ. ಹಾಗೆಯೇ ಸ್ಮೃತಿಶಾಸ್ತ್ರದಲ್ಲಿ ಹೀಗೆ ಹೇಳಿದೆ
ಏಕ ಏವ ಪರೋ ವಿಷ್ಣುಃ ಸರ್ವವ್ಯಾಪೀ ನ ಸಂಶಯಃ |
ಐಶ್ವರ್ಯಾದ್ ರೂಪಮ್ ಏಕಂ ಚ ಸೂರ್ಯವತ್ ಬಹುಧೇಯತೇ ||
ವಿಷ್ಣುವು ಒಬ್ಬನೇ, ಆದರೂ ಅವನು ನಿಶ್ಚಯವಾಗಿಯೂ ಸರ್ವವ್ಯಾಪಿ. ಗ್ರಹಿಕೆಗೆ ಮೀರಿದ ಅವನ ಶಕ್ತಿಯಿಂದ ಸೂರ್ಯನು ಬಹುಸ್ಥಳಗಳಲ್ಲಿ ಒಂದೇ ಕಾಲದಲ್ಲಿ ಕಾಣಿಸುವಂತೆ ತನಗೆ ಒಂದೇ ರೂಪವಿದ್ದರೂ ಎಲೆಲ್ಲೂ ಇದ್ದಾನೆ. 


ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು