ಗಣಪತಿಗೆ ಏಕದಂತ ಎಂಬ ಹೆಸರು ಹೇಗೆ ಬಂತು?


ಕಾರ್ತವೀರ್ಯನನ್ನು ವಧಿಸಿದ ನಂತರ ಪರಶುರಾಮರು ಕೈಲಾಸಕ್ಕೆ ಹೋದರು. ಅಲ್ಲಿ ಅವರಿಗೆ ಗಣಗಳ ಮತ್ತು ಗಣಾಧೀಶನಾದ ಗಣಪತಿಯ ಭೇಟಿ ಆಯಿತು. ಪರಶುರಾಮರಿಗೆ ಭಗವಾನ ಶಂಕರನ ಭೇಟಿ ಮಾಡುವ ಇಚ್ಛೆ ಇತ್ತು.

ಪರಶುರಾಮರು ಗಣೇಶನನ್ನು ಉದ್ದೇಶಿಸಿ “ಪರಮೇಶ್ವರನಿಗೆ ನಮಸ್ಕರಿಸಲು ಅಂತಃಪುರಕ್ಕೆ ಹೊರಟಿದ್ದೇನೆ, ವಂದಿಸಿ ತಕ್ಷಣ ಹಿಂತಿರುಗುವೆನು. ಯಾರ ಕೃಪೆಯಿಂದ ನಾನು ಕಾರ್ತವೀರ್ಯನನ್ನು ವಧಿಸಿ, ಇಪ್ಪತ್ತೊಂದು ಬಾರಿ ಭೂಮಿಯನ್ನು ಕ್ಷತ್ರೀಯ ರಹಿತ ಮಾಡಿದೆನೋ ಅಂತಹ ಜಗದ್ಗುರುಗಳನ್ನು ನಾನು ಭೇಟಿ ಮಾಡಲೇಬೇಕು”. ಆದರೆ ಆ ಸಮಯದಲ್ಲಿ ಶಿವ-ಪಾರ್ವತಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆದುದರಿಂದ ಗಣೇಶನು ಅವರನ್ನು ತಡೆದು, ಸ್ವಲ್ಪ ಸಮಯ ಕಾದು ಕುಳಿತುಕೊಳ್ಳುವಂತೆ ತಿಳಿಸಿದನು.

ಆದರೆ ಗಣೇಶನ ಮಾತು ಕೇಳದೆ ಪರಶುರಾಮರು ಪರಶು ಹಿಡಿದು ಅಂತಃಪುರದತ್ತ ಹೊರಟಿದ್ದರು. ಆಗ ಅವರನ್ನು ಪ್ರೀತಿ ಮತ್ತು ನಮ್ರತೆಯಿಂದ ತಡೆಯಲು ಪ್ರಯತ್ನಿಸಿದ ಗಣೇಶನನ್ನು ದಂಡಿಸಲು ಪರಶುರಾಮರು ಪರಶು ಎತ್ತಿದರು. ಗಣೇಶನು ಧರ್ಮದ ಸಾಕ್ಷಿಯಾಗಿ ಪುನಃ ಪರಶುರಾಮರನ್ನು ತಡೆದನು. ಆದರೂ ಪರಶುರಾಮರು ಕಾದು ಕುಳಿತುಕೊಳ್ಳಲು ನಿರಾಕರಿಸಿದರು. ಆಗ ಗಣೇಶನು ತನ್ನ ಸೊಂಡಿಲನ್ನು ಕೋಟಿ ಯೋಜನದಷ್ಟು ದೊಡ್ಡದಾಗಿ ಮಾಡಿ ಅದರಲ್ಲಿ ಪರಶುರಾಮರನ್ನು ಸಿಲುಕಿಸಿ ಸಪ್ತಲೋಕಗಳಲ್ಲಿ ತಿರುಗಿಸಿದನು. ಇದರಿಂದ ಕೋಪಗೊಂಡ ಪರಶುರಾಮರು ದತ್ತ ಗುರುಗಳು ನೀಡಿದ್ದ ಸ್ತೋತ್ರಕವಚ ಪಠಿಸಿ ಗಣೇಶನ ಮೇಲೆ ಪರಶು ಎಸೆದರು. ಅದನ್ನು ತಡೆಯಲು ಗಣೇಶನು ತನ್ನ ಎಡಗಡೆಯ ದಂತವನ್ನು ಮುಂದೆ ಮಾಡಿದನು. ಪರಶುವಿನ ಶಕ್ತಿಯು ಇಲ್ಲವಂತಾಯಿತು, ಆದರೆ ಅದರ ಶಕ್ತಿಗೆ ಗಣೇಶ ದಂತ ಮುರಿದು ಹೋಯಿತು.

ಇದನ್ನು ತಿಳಿದ ದೇವ-ದೇವತೆಗಳು ಎಲ್ಲರೂ ಸೇರಿದರು. ಶಿವ-ಪಾರ್ವತಿ ಕೂಡ ಹೊರಗೆ ಬಂದರು. ನಡೆದ ಘಟನೆ ತಿಳಿದ ಮೇಲೆ ಪಾರ್ವತಿಯು ಪರಶುರಾಮರನ್ನು ಸಂಬೋಧಿಸಿ “ಹೇ ರಾಮ, ನಿನ್ನ ಜನ್ಮವು ಬ್ರಾಹ್ಮಣವಂಶದಲ್ಲಿ ಆಗಿದೆ, ನೀನು ಪಂಡಿತನಾಗಿದ್ದು, ಜಮದಗ್ನಿಯ ಪುತ್ರ ಮತ್ತು ಯೋಗಿರಾಜನ ಶಿಷ್ಯನೂ ಹೌದು. ನಿನ್ನ ತಾಯಿ, ಮಾಮಾ, ಅಜ್ಜ ಎಲ್ಲರೂ ಶ್ರೇಷ್ಠರು. ಆದರೂ ನೀನು ಯಾವ ದೋಷದ ಕಾರಣದಿಂದ ಹೀಗೆ ಮಾಡಿರುವೆ? ಅಮೋಘವಾದ ಪರಶುವಿನಿಂದ ಯಾರಾದರೂ ಸಿಂಹವನ್ನು ಹೊಡೆಯಬಹುದು, ಅಂತ ಪರಶುವನ್ನು ನೀನು ಗಣೇಶನ ಮೇಲೆ ಪ್ರಯೋಗ ಮಾಡಿದಿ! ನಿನ್ನಂತ ಕೋಟಿ ಕೋಟಿ ರಾಮರನ್ನು ಸೋಲಿಸಲು ಗಣೇಶನು ಸಮರ್ಥನಾಗಿದ್ದಾನೆ. ಅರೇ, ಈ ಗಣೇಶನು ಕೃಷ್ಣನ ಅಂಶ. ದೊಡ್ಡ ವ್ರತದ ಕಾರಣದಿಂದ ಇವನ ಜನ್ಮವಾಗಿದೆ”, ಎಂದ ಹೇಳಿದಳು.

ಆಗ ಶ್ರೀವಿಷ್ಣು “ಹೇ ದೇವಿ ಪಾರ್ವತಿ, ನಿಮಗೆ ಗಣೇಶ ಮತ್ತು ಕಾರ್ತಿಕೇಯ ಹೇಗೊ, ಹಾಗೆ ಪರಶುರಾಮ ಕೂಡ, ಇವರ ಸ್ನೇಹ ಮತ್ತು ಪ್ರೇಮದಲ್ಲಿ ಯಾವ ಬೇಧವೂ ಇಲ್ಲ. ಇಂದಿನಿಂದ ನಿಮ್ಮ ಪುತ್ರನ ಹೆಸರು ಏಕದಂತ ಎಂದಾಗಿದೆ. ಇವರ ಕುಲದಲ್ಲಿ ಎಂಟು ನಾಮಗಳಿವೆ-ಗಣೇಶ, ಏಕದಂತ, ಹೇರಂಬ, ವಿಘ್ನನಾಯಕ, ಲಂಬೊದರ, ಶೂರ್ಪಕರ್ಣ, ಗಜವಕ್ರ, ಗೃಹಗಜ”, ಎಂದರು. ಶ್ರೀವಿಷ್ಣುವು ಗಣೇಶಸ್ತೋತ್ರ ಕಥೆ ಪಠಣ ಮಾಡಿ ಹೀಗೆ ಹೇಳಿದರು “ಹೇ ದುರ್ಗೇ, ಈ ಪರಶುರಾಮನ ಮೇಲೆ ಸಿಟ್ಟು ಮಾಡಬೇಡ. ಈ ಘಟನೆಯಿಂದಲೇ ಗಣೇಶನಿಗೆ ’ಏಕದಂತ’ ನಾಮವು ಪ್ರಾಪ್ತವಾಗಿದೆ. ನೀವು ಪುತ್ರ ಸಮಾನಾದ ಪರಶುರಾಮನಿಗೆ ಅಭಯ ನೀಡಿ”, ಎಂದರು. ಅಂದಿನಿಂದ ಶ್ರೀ ಗಣೇಶನಿಗೆ ಏಕದಂತ ಎಂಬ ಹೆಸರು ಬಂತು.

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು